ಬಹುದಿನಗಳ ಕನಸು - ಈ ಕನ್ನಡ ಲೇಖನಗಳ ಬ್ಲಾಗ್. ಹಲವರು ಹೇಳಿದ ಮಾತಿನ ಮೇರೆಗೆ ಈ ಕನಸಿಗೆ ರೂಪಕೊಡುವ ಪ್ರಯತ್ನಕ್ಕೆ ಕೈ ಹಾಕಿದ್ದೇನೆ. ನಿಮಗೆ ಪ್ರಿಯವಾಗಬಹುದು ಎಂದು ಆಶಿಸುತ್ತಾ ಹೆಜ್ಜೆ ಇಡುತ್ತಿದ್ದೇನೆ. ಆಶೀರ್ವದಿಸಿ!
"ಅದೊಂದು ಭಾನುವಾರ...." ಉಹೂ! ಸರಿ ಕಾಣಲಿಲ್ಲ. ಈ ಐದನೆಯ ಹಾಳೆಯನ್ನೂ ಕಸದ ಬುಟ್ಟಿಗೆ ಬಿಸಾಡಿ, ವಿಶ್ವ ಕುರ್ಚಿಯ ಕುತ್ತಿಗೆಯ ಮೇಲೆ ತಲೆಯಿಟ್ಟು, ಮೇಲೆ ಗಿರ್ರನೆ ತಿರುಗುತ್ತಿದ್ದ ಫ್ಯಾನನ್ನು ನೋಡುತ್ತಾ ಹಾಗೆ ಕಣ್ಣು ಮುಚ್ಚಿದ. ಮನಸು ಕೆಲದಿನಗಳ ಹಿಂದಿನ ನೆನಪನ್ನು ಮೆಲಕು ಹಾಕುತ್ತಿತ್ತು.....
ಅದೊಂದು ಲೇಖಕರ ಶಿಬಿರ. ಕಥೆ ರಚನೆಯ ಒಳ-ಹೊರಗುಗಳನ್ನು ಖ್ಯಾತನಾಮರು ವಿವರಿಸುವ ಸಭೆ. ಪುಡಿಸಾಹಿತಿ ವಿಶ್ವನೂ ಹೋಗಿದ್ದ. ಹಿರಿಯರೊಬ್ಬರು ಮಾತಾಡುತ್ತಾ "ಲೇಖಕ ಆದವ ಯಾವತ್ತಿಗೂ ಸೂಕ್ಷ್ಮ ಸಂವೇದನೆ ಉಳ್ಳವನಾಗಿರಬೇಕು. ನಿತ್ಯ ಬದುಕಿನ ಸಾಮಾನ್ಯ ಘಟನೆಗಳನ್ನು, ಸಾಮಾನ್ಯ ಕಥೆಗಳನ್ನು ಗಮನಿಸಿ, ಅದನ್ನು ತನ್ನ ಕಥೆಯ ಹಂದರಕ್ಕೆ ತಂದು, ಬಣ್ಣ ಬಳಿದು ರಚಿಸಬೇಕು. ಈ ಸಾಮಾನ್ಯರನ್ನು ಗಮನಿಸಲು, ನಾನು ಹೇಳಿದ ಹಾಗೆ, ಸೂಕ್ಷ್ಮ ಸಂವೇದನೆ ಇರಬೇಕು..." ವಿಶ್ವನಿಗೆ ಸೂಕ್ಷ್ಮ ಸಂವೇದನೆ ಎಂದರೇನು ಎಂದು ತಿಳಿಯಲಿಲ್ಲ. ಪಕ್ಕದಲ್ಲಿ ಕುಳಿತಿದ್ದ ಒಬ್ಬರನ್ನು ಕೇಳಿದಾಗ ಅವರು ತಮ್ಮ ನಿದ್ದೆ ಹಾಳು ಮಾಡಿದನೆಂದು ಗೊಣಗಿ ಬೇರೆ ಕಡೆಗೆ ಸ್ಥಳಾಂತರ ಮಾಡಿದರು. ವಿಶ್ವನೂ ಎದ್ದು ಬಂದ.
ಮನಸು ಮತ್ತೆ ಇಂದಿಗೆ ಮರಳಿತು. ಎದ್ದವನೇ, ವಿಶ್ವ ತನ್ನ ಪ್ರೀತಿಯ ಖಾದಿಯ ಬ್ಯಾಗೊಂದನ್ನು ಹೆಗಲೇರಿಸಿ ಹೊರಟ - ಏನಾದರು ವಸ್ತು ಸಿಗಬಹುದೇನೋ ಎಂದು! ಅದು "ಸಾಹಿತಿ ಬ್ಯಾಗಂ"ತೆ! ಅದನ್ನು ಹಾಕಿಕೊಂಡವರೆಲ್ಲ ಸಾಹಿತಿಗಳಾಗಿದ್ದರೆ!
ರಸ್ತೆಯ ಮೂಲೆಯಲ್ಲಿ ಮೂರ್ತಿಯ ಚುರಮುರಿ ಗಾಡಿ ಕಂಡಿತು. ಮೂರ್ತಿಯದು ವಿಶ್ವನದು ಬಹಳ ಹಳೆಯ ಸಂಬಂಧ. ವಿಶ್ವ ಚಿಕ್ಕವನಿದ್ದ ಕಾಲದಿಂದಲೂ ಅಲ್ಲಿಗೆ ಪ್ರತಿ ಭಾನುವಾರ ಹೋಗುತ್ತಿದ್ದ.
"ಏನು ಮೂರ್ತಿ! ಬಹಳ ದಿನಗಳಿಂದ ಕಾಣಲಿಲ್ಲ. ಏನು ಸಮಾಚಾರ?" ಎಂದು ವಿಶ್ವ ತನ್ನ ಮಾಮೂಲಿ ಚುರ್ಮುರಿಯ ಕಡೆಗೆ ಸನ್ನೆ ಮಾಡುತ್ತಾ ವಿಚಾರಿಸಿದ.
ತರಕಾರಿಗಳನ್ನು ಸಿದ್ಧಮಾಡುತ್ತಾ ಮೂರ್ತಿ ಮಾತಿಗೆ ಮುಂದಾದ. "ಏನು ಹೇಳಲಿ ವಿಶ್ವಪ್ಪ? ಸ್ವಲ್ಪ ದಿನ ಮನೆ ಬಿಟ್ಟು ದೇಶಾಂತರ ಹೋಗಿದ್ದೆ!"
"ನಿನಗೇನಾಗಿತ್ತು?!" ಆಶ್ಚರ್ಯದಿಂದ ವಿಶ್ವ ಕೇಳಿದ.
"ನಮ್ಮ ಅಜ್ಜಿಯದು ಒಂದೇ ಕಾಟ! ನಾನು ಚಿಕ್ಕವನಿದ್ದಾಗ ನನ್ನ ಅಪ್ಪ ಅಮ್ಮ ಸತ್ತು ಹೋದರು. ಆವಾಗಿನಿಂದ ಆ ಮುದುಕಿನೆ ನನ್ನ ಸಾಕಿದ್ದು. ಇಷ್ಟು ದಿನ ಚೆನ್ನಾಗೆ ಇದ್ಲು. ಇತ್ತೀಚಿಗೆ, ನನ್ನ ಮದುವೆ ಮಾಡ್ಕೋ ಅಂತ ಪ್ರಾಣ ತಿಂತಿದಾಳೆ. ಅಲ್ಲ ವಿಶ್ವಪ್ಪ, ನಾನು ದುಡಿಯೋದು ನಂಗೆ, ಆ ಮುದುಕಿಗೆ ಎರಡು ಹೊತ್ತು ಊಟಕ್ಕೆ ಸಾಕಗತ್ತೆ ಅಷ್ಟೇ. ಹೀಗಿರೋವಾಗ, ನಾನು ಮದುವೆ ಆಗಿ, ಬರೋಳ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕ್ಲ? ನನ್ನ ಈ ಸಂಪಾದನೆಗೆ ಮದ್ವೆ ಷೋಕಿ ಬೇಕ, ನೀವೇ ಹೇಳಿ? ಮುದುಕಿ ಅವಳ ಹಠ ಬಿಡಲ್ಲ, ನಾನು ಒಪ್ಪಲ್ಲ! ಅದ್ಕೆ, ಅವಳನ್ನ ಹೆದರಿಸಕ್ಕೆ, ಸ್ವಲ್ಪ ದಿನ ಮನೆ ಬಿಟ್ಟು ನನ್ನ ಸ್ನೇಹಿತನ ಮನೆಗೆ ಹೋಗಿದ್ದೆ" ಎನ್ನುತ್ತಾ ಮೂರ್ತಿ ಚುರಮುರಿ ಸಿದ್ಧ ಮಾಡಿ ಕೊಟ್ಟ. "ನೋಡಿ ವಿಶ್ವಪ್ಪ, ಸಾಕೋ ಯೋಗ್ಯತೆ ಇಲ್ಲ ಅಂದ ಮೇಲೆ, ಮದ್ವೆ ಆಗಬಾರದು. ನಮ್ಮ ಹಣೆಬರಹಕ್ಕೆ ಬೇರೆಯವರ ಮನೆ ಹೆಣ್ಣುಮಗೂನ ಬಲಿ ಕೊಡಬಾರದು. ಮುಂದೆ ನಿಮ್ಮ ಮದುವೆ ಆಗೋ ಕಾಲಕ್ಕೆ ಈ ಮಾತು ನೆನಪು ಇಟ್ಕೋಳಿ" ಎಂದು ವಿಶ್ವನಿಂದ ಹಣ ತೆಗೆದುಕೊಂಡ.
ಮೂರ್ತಿಯ ಮಾತನ್ನು ಮೆಲಕು ಹಾಕುತ್ತ, ಖಾರವಾದ ಚುರಮುರಿ ಸವಿಯುತ್ತ ವಿಶ್ವ ಹೊರಟ.
ಪಕ್ಕದ ಬೀದಿಯಲ್ಲಿ, ಚೌಲ್ಟ್ರಿಯ ಎದುರು ಜನ ಜೋರಾಗಿ ನಗುತ್ತಿದ್ದರು. ಹೋಗಿ ನೋಡಿದ. ಆಗಷ್ಟೇ ಮದುವೆಯಾದ ದಂಪತಿಗಳು. ಅವರಿಗೆ ವಸಿಷ್ಠ - ಅರುಂಧತಿ ನಕ್ಷತ್ರಗಳನ್ನು ತೋರಿಸುವ ಸಂಭ್ರಮ. ಪುರೋಹಿತನಿಗಿಂತ ಕ್ಯಾಮೆರಾದವನ ಆದೇಶಗಳೇ ಜೋರಾಗಿದ್ದವು. ವಿಶ್ವ ತನ್ನ ಅಜ್ಜಿಯನ್ನೊಮ್ಮೆ ಕೇಳಿದ್ದ - ಹಿಂದೆ ಅವರ ಸಂಬಂಧಿಯೊಬ್ಬರ ಮದುವೆಯ ಸಂದರ್ಭದಲ್ಲಿ - ಈ ಶಾಸ್ತ್ರದ ಅರ್ಥ ಏನೆಂದು. ವಸಿಷ್ಠ ಅರುಂಧತಿಯರ ಮಾದರಿ ದಾಂಪತ್ಯ, ಅನ್ಯೋನ್ಯತೆ ಮೊದಲಾಗಿ ಏನೇನೋ ಅಜ್ಜಿ ಹೇಳಿದ್ದ ಅಸ್ಪಷ್ಟ ನೆನಪು ಅವನಿಗಾಯಿತು. ಬೆಳಗ್ಗೆ ಹೊತ್ತು ಸೂರ್ಯನಲ್ಲದೆ ಇನ್ಯಾವ ನಕ್ಷತ್ರ ಕಾಣದಿದ್ದರೂ, ಫೋಟೋಗಳಿಗಾಗಿ ವಿಧ ವಿಧ ಭಾವ-ಭಂಗಿಗಳಲ್ಲಿ ನಿಲ್ಲುವುದು ವಿಶ್ವನಿಗೆ ತಮಾಷೆಯಾಗಿ ಕಂಡಿತು. "ಸಧ್ಯ! ನಾನು ಆ ತಮಾಷೆಗೆ ಗುರಿಯಾಗುವ ಕಾಲ ಇನ್ನೂ ದೂರವಿದೆ" ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡು ವಿಶ್ವ ಇನ್ನೊಂದು ರಸ್ತೆಗೆ ತಿರುಗಿದ.
ಅದೊಂದು ಹಳೆಯ ಕಾಲದ ಮನೆಗಳಿದ್ದ ಬೀದಿ. ಅಂದರೆ, ಇನ್ನೂ ಅಪಾರ್ಟ್ ಮೆಂಟ್ಗಳ ಧಾಳಿಯಾಗದೆ ಇದ್ದ ಕೆಲವೇ ಬೀದಿಗಳಲ್ಲಿ ಇದೂ ಒಂದು. ಹೊರಗೆ ತಂತಿಗಳಿಂದ ತೂಗಾಡುತ್ತಿದ್ದ ಪಂಚೆಗಳು, ಅಂಗಳದ ತುಳಸಿ ಕಟ್ಟೆಗಳು, ಗೇಟಿನ ಎದುರಿದ್ದ ರಂಗೋಲಿಗಳು - ಇವುಗಳು, ಇಲ್ಲಿ ಇರುವುದು ಬ್ರಾಹ್ಮಣರ ಮನೆಗಳು ಎಂದು ಸಾರುತ್ತಿದ್ದವು. ಅಂತಹ ಮನೆಯೊಂದರ ಹೊರಗಡೆ, ಹಳೆಕಾಲದ ಬೆತ್ತದ ಕುರ್ಚಿಯೊಂದರ ಮೇಲೆ ಯಜಮಾನರೊಬ್ಬರು ಕುಳಿತಿದ್ದರು - ಅರೆಬೆತ್ತಲೆಯಾಗಿ. ಅವರ ಹೆಂಡತಿ ಇರಬೇಕು - ತಲೆಗೆ ಎಣ್ಣೆ ಒತ್ತುತ್ತಾ ಮಾತಾಡುತ್ತಿದ್ದರು. ವಿಶ್ವ ಆ ದೃಶ್ಯವನ್ನೇ ನೋಡುತ್ತಾ ನಿಂತ - ಅವನಿಗೆ ಅದರಲ್ಲಿ ಅದೇನೋ ವೈಶಿಷ್ಟ್ಯ ಕಂಡಿತು.
"ಏನ್ರೀ? ಇನ್ನು ಸ್ವಲ್ಪ ಎಣ್ಣೆ ತರಲೇ?" ಎಂದು ರಾಗವಾಗಿ ಅವಳು ಕೇಳಿದಳು.
"ಏನು ಬೇಡ. ಅದಿರಲಿ, ಏನು ಇವತ್ತು ಇಷ್ಟು ಉಪಚಾರ ಮಾಡ್ತಾ ಇದ್ಯಲ್ಲ? ಯಾವ ಏಟಿಗೆ ಪೀಠಿಕೆ ಇದು?" ಇವನು ಅನುಮಾನಿಸುತ್ತಾ ಕೇಳಿದ.
"ಅದ್ಯಾಕೆ ಹಾಗೆ ಹೇಳ್ತೀರಾ? ಏನೋ ಗಂಡ ಅನ್ನೋ ವಿಶ್ವಾಸಕ್ಕೆ ಕೇಳ್ದೆ."
"ಇರಲಿ ಅದೇನು ಹೇಳು...."
"ಬೈಬಾರದು ಮತ್ತೆ?!"
"ಇಲ್ಲ ಹೇಳೇ..."
"ಏನಿಲ್ಲಾ...ನಮ್ಮ ಜ್ಯೋತಿ ಇವಾಗ ಸೆಕೆಂಡ್ ಸ್ಟ್ಯಾಂಡರ್ಡ್..."
"ಗೊತ್ತು."
"ಅವಳಿಗೆ ಇನ್ಮೇಲೆ ಓದೋದು ಜಾಸ್ತಿ ಇರತ್ತೆ..."
"ಲೇ, ಇವಾಗ್ಲೇ ಏನು ಓದಬೇಕೆ ಅವಳು? ಆಡಿಕೊಂಡು ಇರಲಿ ಬಿಡು..."
"ಹಾಗಲ್ಲಾ. ಅವಳಿಗೆ ಅವಳದೆ ಆದ ಜಾಗ ಬೇಕು ಅಂತ..."
"ಹಾಗಂತ ಅವಳೇ ಹೇಳಿದಳ ನಿಂಗೆ?" ಸ್ವಲ್ಪ ಗಡಸು ದನಿಯಲ್ಲಿ ಕೇಳಿದ.
"ಇಲ್ಲಾ. ಆದ್ರೆ, ಮುಂದೆ ಬೇಕು ಅಲ್ವ?" ಇವಳ ದನಿಯಲ್ಲಿ ಸ್ವಲ್ಪ ನಡುಕ ಇತ್ತು.
"ಅದಿಕ್ಕೇನು ಇವಾಗ?" ಇವನಿಗೆ ಸ್ವಲ್ಪ ಕೋಪವೇ ಬಂದಿತ್ತು.
"ಬೇರೆ ಮನೆ ಮಾಡಿ ಅಂತ..." ಹೆದರುತ್ತಲೇ ಇವಳು ಹೇಳಿದಳು.
ಕುರ್ಚಿಯಿಂದ ಇವನು ಎದ್ದವನೇ ರೇಗಾಡಲು ಶುರು ಮಾಡಿದ. "ಗೊತ್ತಿತ್ತು ನನಗೆ. ಏನು ಇಲ್ಲದೆ ನನಗೆ ಈ ಎಣ್ಣೆ ಸ್ನಾನದ ಉಪಚಾರ ನಡೀತಿರಲಿಲ್ಲ ಅಂತ. ಇಷ್ಟು ತಿಳ್ಕೊಳ್ದೆ ನಿನ್ನ ಮದುವೆ ಆದ್ನಾ ನಾನು? ಭಾನುವಾರ ಬೆಳಗ್ಗೆ ಸ್ಪೆಷಲ್ ಕಾರ್ಯಕ್ರಮದ ಥರ "ಬೇರೆ ಮನೆ ಮಾಡಿ" ಅಂತ ಪ್ರಾಣ ತೆಗಿತೀಯಲ್ಲಾ! ನಿನ್ನ ಮದ್ವೆ ಮಾಡ್ಕೊತೀನಿ ಅಂದಾಗಲೇ ನಮ್ಮಮ್ಮ ಇನ್ನಿಲ್ದಾಗೆ ಹೇಳಿದ್ರು - "ಬೇಡವೋ! ಅವ್ಳು ನಿನ್ನ ಪ್ರೀತಿ ಮಾಡಿದಾಳೆ. ಈ ಮನೇನಲ್ಲ. ಯಾವತ್ತಿದ್ರೂ ಈ ಮನೇನ ಒಡಿತಾಳೆ" ಅಂತ. ನಾನೇ ಅವಳ ಮಾತು ಕೇಳಲಿಲ್ಲ. ಅಂತು ತೊರಿಸಿಬಿಟ್ಟೆಯಲ್ಲ ನಿನ್ನ ಬುದ್ಧೀನ! ಥೂ ನಿನ್ನ ಜನ್ಮಕ್ಕೆ..." ಎಂದು ಹೆಂಡತಿಯನ್ನು ಜರೆಯುತ್ತಾ, ಒಳಗೆ ನಡೆದುಬಿಟ್ಟ! ಇವಳು ಅಲ್ಲೇ ಅಳುತ್ತಾ ನಿಂತಳು.
ವಿಶ್ವನಿಗೆ ಅಲ್ಲಿ ನಿಂತು ತಪ್ಪು ಮಾಡಿದೆ ಅನ್ನಿಸಿತು. ಮನೆಯೆಡೆಗೆ ನಡೆದ. ಮನೆಗೆ ಹೋದವನೇ, ಅಜ್ಜಿಯ ತೊಡೆಯ ಮೇಲೆ ತಲೆಯಿಟ್ಟು "ಅಜ್ಜಿ, ಕಥೆ ಹೇಳು. ಯಾವತ್ತೂ, ಯಾರಿಗೂ ಈ ಕಥೇನ ಯಾರೂ ಹೇಳಿರಬಾರದು. ಅಂತಹ ಕಥೆ ಹೇಳು" ಎಂದ. "ಅಯ್ಯೋ ಮಗು! ಯಾರಿಗೂ ಗೊತ್ತಿಲ್ಲದ ಕಥೇನ ನಾನು ನಿನಗೆ ಹೇಗೆ ಹೇಳಲಿ? ಹೇಳೋ ಪ್ರತಿ ಕಥೆನೂ ಇನ್ಯಾರೋ ಇನ್ಯಾರಿಗೋ ಹೇಳೇ ಇರ್ತಾರೆ, ಇಲ್ಲಾ ಅನುಭವಿಸಿಯೇ ಇರ್ತಾರೆ. ಎಲ್ಲರ ಮನೆ ದೋಸೇನೂ ತೂತೆ! ನಮ್ಮ ಕಥೆ ಅಂತ ನಾವೇನು ಹೇಳ್ತೀವಿ, ಅದು ನಿಜವಾಗಿ ನಮ್ಮದಲ್ವೇ ಅಲ್ಲ. ಅದೇ ಕಥೇನ ನಾವು ಒಂದು ಥರ ನೋಡ್ತೀವಿ, ಇನ್ನೊಬ್ರು ಬೇರೆ ಥರ ನೋಡ್ತಾರೆ ಅಷ್ಟೇ" ಎನ್ನುತ್ತಾ ಅಜ್ಜಿ ಇವನನ್ನು ತಟ್ಟುತ್ತಾ ಯಾವುದೋ ದೇವರನಾಮವನ್ನು ಗುನುಗಲು ಶುರು ಮಾಡಿದಳು.
ಸ್ವಲ್ಪ ಹೊತ್ತಿನ ನಂತರ ವಿಶ್ವ ತನ್ನ ಕೋಣೆಗೆ ಹೋಗಿ, ತನ್ನ ಮೇಜಿನ ಬಳಿ ಕುಳಿತ. ಪೆನ್ನು ಕೈಯಲ್ಲಿ ಹಿಡಿದವನೇ ಬರೆಯಲು ಶುರು ಮಾಡಿದ - "ಅದೊಂದು ಭಾನುವಾರ. ಅವನು ತನ್ನ...."